ಅನೂರಾಧ ಧಾರೇಶ್ವರ್
	1938 ಬಹುಭಾಷಾ ಗಾಯಕಿ ಉತ್ತರ ಕರ್ನಾಟಕದಲ್ಲಿ ಸುಗಮಸಂಗೀತವನ್ನು ಜನಪ್ರಿಯಗೊಳಿಸಿದ ಮಹಿಳಾ ಗಾಯಕಿಯರಲ್ಲಿ ಪ್ರಮುಖರು. ಅನೂರಾಧ ಧಾರೇಶ್ವರ್ ಹುಟ್ಟಿದ್ದು ಹುಬ್ಬಳ್ಳಿಯಲ್ಲಿ - 1938ರಲ್ಲಿ. ತಂದೆ ನಾಗೇಶ್ವರರಾವ್, ತಾಯಿ ಕೃಷ್ಣಾಬಾಯಿ. ಮದುವೆಯ ನಂತರ ಶಾಂತಿಮತಿಗೆ ಅತ್ತೆ ಮನೆಯವರು ಇಟ್ಟ ಹೆಸರು ಅನುರಾಧಾ ಧಾರೇಶ್ವರ್.

	ತಾಯಿ ಕೃಷ್ಣಾಬಾಯಿ ಮನೆಯಲ್ಲಿ ಹಾರ್ಮೋನಿಯಂ ನುಡಿಸುತ್ತಾ ದೇವರ ನಾಮ ಹಾಡುತ್ತಿದ್ದರೆ, ಬಾಲಕಿ ಶಾಂತಿಮತಿ, ತಾವೂ ದನಿಗೂಡಿಸುತ್ತಿದ್ದರು. ತಾಯಿ ಹೇಳಿಕೊಡುತ್ತಿದ್ದ ದೇವರನಾಮಗಳನ್ನೆಲ್ಲಾ ಶ್ರದ್ಧೆಯಿಂದ ಕುರಿತು ಹಾಡುತ್ತಿದ್ದರು. ಸ್ವಾತಂತ್ರ್ಯ ಚಳವಳಿಯ ಆ ದಿನಗಳಲ್ಲಿ ಆಟದ ಮೈದಾನದಲ್ಲಿ ಬಿಳಿ ಸಮವಸ್ತ್ರಧಾರಿ ಸ್ವಯಂ ಸೇವಕರು. ಮಕ್ಕಳನ್ನು ಸಾಲಾಗಿ ನಿಲ್ಲಿಸಿ ದೇಶಭಕ್ತಿಗೀತೆಗಳನ್ನು ಕಲಿಸಿಕೊಡುತ್ತಿದ್ದರು. ಶಾಂತಿಮತಿಯೂ ಆ ಸಂಘಟನೆಯಲ್ಲಿ ಭಾಗಿಯಾಗಿ, ಹಾಡುವುದನ್ನು ಕಲಿತರು. ಅಂದಿನ ಹಾಡುಗಳು ಜನಪ್ರಿಯ ಸಿನಿಮಾ ಹಾಡಿನ ಧಾಟಿಯಲ್ಲಿದ್ದು ಮಕ್ಕಳಿಗೆ ಕಂಠಪಾಠ ಮಾಡಲು ಸುಲಭವಾಗಿತ್ತು.

	ತಂದೆಯ ನಿಧನನಾಂತರ ಕುಟುಂಬ ರಾಣಿಬೆನ್ನೂರಿನಿಂದ ಧಾರವಾಡಕ್ಕೆ ಬಂದು ನೆಲಸಿತು. ಶಾಂತಿಮತಿಯ ಬಾಲ್ಯ ಬಡತನದಲ್ಲೇ ಕಳೆಯಿತು. ತಾಯಿ ಕೃಷ್ಣಾಬಾಯಿ ಮನೆಯಲ್ಲೇ ಹೊಲಿಗೆ, ಮೊದಲಾದ ಚಿಕ್ಕಪುಟ್ಟ ಉದ್ಯೋಗಮಾಡಿ ಮಕ್ಕಳನ್ನು ಬೆಳಸಿದರು. ಶಾಂತಿಮನೆಯ ಮಧುರಗಾಯನ, ಚುರುಕು ಬುದ್ಧಿ ನೋಡಿ ಕೆ.ಇ. ಬೋರ್ಡ್ ಹೈಸ್ಕೂಲಿನ ಮುಖ್ಯೊಪಾಧ್ಯಾಯ ಎಸ್.ಜಿ. ನಾಡಗೇರ ಶಾಂತಿಮತಿಗೆ ತಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಮಾಡಿಕೊಟ್ಟರು.

	ಧಾರವಾಡ ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಪ್ರಸಾರವಾಗುತ್ತಿದ್ದ `ಗಿಳಿವಿಂಡು ಕಾರ್ಯಕ್ರಮದಲ್ಲಿ ಹಾಡಲು ಅವಕಾಶ (1954) ಆ ವಿಭಾಗದ ನಿರ್ದೇಶಕರಾದ ಎನ್.ಕೆ. ಕುಲಕರ್ಣಿ ನೀಡಿದ ಅವಕಾಶದಿಂದ ಪುಟ್ಟ ಗಿಳಿಮರಿ, ಆಕಾಶವಾಣಿಯ ಕೋಗಿಲೆಯಾಗಿ ಬೆಳೆದರು. ಶಾಂತಿಮತಿ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮದರ್ಜೆಯಲ್ಲಿ ಉತ್ತೀರ್ಣರಾದರು, ಆ ವೇಳೆಗೆ ಶಾಂತಿಮತಿ ಹುಬ್ಬಳ್ಳಿ ಧಾರವಾಡದಲ್ಲಿ ಗಾನಗಂಗೊಳ್ಳಿ ಎಂದು ಪ್ರಸಿದ್ಧರಾಗಿದ್ದರು. 

	ಆಗ ಹುಬ್ಬಳ್ಳಿಯ ಖ್ಯಾತ ಸಂಗೀತಗಾರರೂ ಅಗ್ರಪಂಕ್ತಿಯ ಗಾಯಕರೂ ಆಗಿದ್ದವರು ಶಂಕರ ದೀಕ್ಷಿತ ಜಂತಿ ಅವರ ಪುತ್ರ ರಾಮಚಂದ್ರ ದೀಕ್ಷಿತ್ ಜಂತಿಯವರೂ ಶಾಸ್ತ್ರೀಯ ಸಂಗೀತದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದರು. ಶಾಂತಿಮತಿ ಸಂಗೀತದ ಅಭ್ಯಾಸವನ್ನು ರಾಮಚಂದ್ರ ಜಂತ್ರಿಯವರಲ್ಲಿ ಪ್ರಾರಂಭಿಸಿದರು. ಸಂಗೀತದ ಸರಿಗಮದೊಂದಿಗೆ ಭಾವಗೀತಾಗಾಯನವೂ ಜೊತೆಗೆ ಸೇರಿಕೊಂಡಿತು. ಆನಂದಕಂದ, ಬೇಂದ್ರೆ, ಡಿ.ಎಸ್.ಕರ್ಕಿ, ಚೆನ್ನವೀರಕಣವಿ ಮೊದಲಾದ ಕನ್ನಡದ ಪ್ರಸಿದ್ಧ ಕವಿಗಳ ರಚನೆಗಳು ಶಾಂತಿಮತಿಯ ಕೊರಳಲ್ಲಿ ಸೆರೆಯಾದವು. ಅಲ್ಲದೆ ಮರಾಠಿ, ಹಿಂದಿ, ಕೊಂಕಣಿ ರಚನೆಗಳನ್ನೂ ಶಾಂತಿಮತಿ ಹಾಡತೊಡಗಿದರು. ಸುಮಾರು ಏಳೆಂಟು ವರುಷ ಪಾಠ ನಡೆಯಿತು. ಹಾಡುತ್ತಲೇ ಹೆಸರು ಮಾಡಿದ ಶಾಂತಿಮತಿಗೆ ಬಾಸೆಲ್ ಮಿಷನ್ ಗಲ್ರ್ಸ್ ಸ್ಕೂಲಿನಲ್ಲಿ ಸಂಗೀತ ಶಿಕ್ಷಕಿಯ ಉದ್ಯೋಗವೂ ದೊರೆಯಿತು. ಎಸ್.ಎಸ್.ಎಲ್.ಸಿ.ಯ ಜೊತೆಗೆ ಎಸ್.ಟಿ.ಸಿ. ತರಬೇತಿಯೂ ಆಗಿತ್ತು. 1959ರಿಂದ 1964ರವರೆವಿಗೆ ಶಾಂತಿಮತಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡಿದರು. ಮುಂಬೈ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಬಾಲಕೃಷ್ಣ ಮಂಗೇಶ ಧಾರೇಶ್ವರ್ ಶಾಂತಿಮತಿಯನ್ನು ಕೈಹಿಡಿದ ಮೇಲೆ ಶಾಂತಿಮತಿಯ ಹೆಸರು ಬದಲಾಗಿ ಹೋಯಿತು. ಪತಿಯೊಡನೆ ಮುಂಬೈಗೆ ತೆರಳಿದ ಅನುರಾಧಾ ಅವರು ಒಂದೂವರೆ ವರ್ಷದೊಳಗೆ ಮರಳಿ ಧಾರವಾಡಕ್ಕೆ ಬಂದರು. ಮುಂಬೈ ಹವಾಗುಣ ಅವರಿಗೆ ಒಗ್ಗಲಿಲ್ಲ ಹಾಗೂ ಸಂಗೀತವಿಲ್ಲದ ಜೀವನ ಹತಾಶೆಯಿಂದ ಕೂಡಿತ್ತು. 1966ರಲ್ಲಿ ಪತಿಯನ್ನೂ ಜೊತೆಗೆ ಧಾರವಾಡಕ್ಕೆ ಕರೆದುಕೊಂಡು ಬಂದರು. ಧಾರವಾಡ ಆಕಾಶವಾಣಿಯಲ್ಲಿ `ಕಾಪಿಯಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡರು. ದಾಖಲೆಗಳನ್ನು ಕೈಯ್ಯಲ್ಲಿ ಬರೆಯುವ ಕೆಲಸವಾಗಿತ್ತು. ಆಗ ಜೆರಾಕ್ಸ್ ಇತ್ಯಾದಿಗಳ ಉಪಯೋಗವಿರಲಿಲ್ಲ. ಸುಮಾರು ಎರಡು ವರುಷ ಈ ಕೆಲಸವನ್ನು ಮಾಡಿದ ಅನುರಾಧ 1967ರಲ್ಲಿ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಕೆಲಸಕ್ಕೆ ಸೇರಿಕೊಂಡರು. ಎರಡು ಮಕ್ಕಳ ತಾಯಿಯಾದ ನಂತರ 1975ರಲ್ಲಿ ಬಿ. ಮ್ಯೂಸಿಕ್ ಪದವಿ ಪಡೆದರು.

	ಅನುರಾಧ ಆಕಾಶವಾಣಿಯ ಉದ್ಘೋಷಕಿಯಾಗಿದ್ದರೂ ಅವರ ಪಾತ್ರ ಹೆಚ್ಚಾಗಿ ಸಂಗೀತ ಕಾರ್ಯಕ್ರಮಗಳಿಗಾಗಿಯೇ ವಿನಿಯೋಗಿಸಲ್ಪಡುತ್ತಿತ್ತು. ಅನುರಾಧ ಹಾಡದ ಕಾರ್ಯಕ್ರಮಗಳೇ ಇರಲಿಲ್ಲ. ಬೆಳಗಿನಲ್ಲಿ, ಬೈಗಿನಲ್ಲಿ ದಿನಕ್ಕೆ ಏಳು ಎಂಟು ಹಾಡುಗಳನ್ನು ಹಾಡುವಂತಹ ಪರಿಸ್ಥಿತಿ ಇರುತ್ತಿತ್ತು. ಧ್ವನಿಮುದ್ರಿಕೆಗಿಂತ ನೇರಪ್ರಸರಣವೇ ಹೆಚ್ಚಾಗಿರುತ್ತಿತ್ತು. ಅನುರಾಧ ಹಾಡಿದ ಹೊಸ ಬಾಳಿನ ಹೊಸಲಿನಲಿ, ನಾವು ನಾಡಾಗುವ ರಸದಬೀಡಾಗುವ, ತಾಳಲಯದಲಿ ಬಾಳ ನಡೆಸು ಮುಂತಾದ ನೂರಾರು ಗೀತೆಗಳು ನೂರಾರು, ಬಾನುಲಿ ರೂಪಕಗಳಲ್ಲಿ ಅನುರಾಧ ತಮ್ಮ ರಾಗಮಾಧುರ್ಯವನ್ನು ತುಂಬಿ ಶ್ರೀಮಂತಗೊಳಿಸಿದರು. ಬಾನುಲಿಯಲ್ಲಿ ಅನುರಾಧ ಅವರ ಹಾಡು ಬಾನುಲಿ ರೂಪಕಗಳೇ ಇಲ್ಲದ ದಿನವೇ ಇಲ್ಲ. ಮಾತೃಭಾಷೆ ಕೊಂಕಣಿಯಾದರೂ ಹಾಡಿದ್ದು ಬಂಗಾಲಿ, ತೆಲಗು, ಹಿಂದಿ, ಮರಾಠಿ, ಕನ್ನಡ, ಮುಂತಾದ ಭಾಷೆಗಳಲ್ಲಿ ಹಾಡಿ ಬಹುಭಾಷಾ ಗಾಯಕಿಯೆನಿಸಿದರು. ಇವರಿಗೆ ಸಂದ ಪ್ರಶಸ್ತಿಗಳು ಅನೇಕ. ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (1988-89), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1995), ಸುಗಮಸಂಗೀತದ ಪ್ರತಿಷ್ಠಿತ ಶಿಶುನಾಳ ಷರೀಫ ಪ್ರಶಸ್ತಿ (1998-99) ಮುಖ್ಯವಾದವು. ಹೀಗೆ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅನುರಾಧ ಧಾರೇಶ್ವರ್ ಸುಮಾರು 30 ವರ್ಷ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 	
											(ಜಯಶ್ರೀ ಅರವಿಂದ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ